ಪರದೈವತಾವಾದ	
ದೇವರ ಅಸ್ತಿತ್ವವನ್ನು ದಿವ್ಯದರ್ಶನದ ಸಹಾಯವಿಲ್ಲದೆ ವಿಚಾರದಿಂದ ಸಮರ್ಥಿಸಬಹುದು ಎಂಬ ನಂಬಿಕೆಯ ಮೇಲೆ ಆಧಾರಿತವಾದ ಒಂದುವಾದ. ದೇವತಾವಾದಕ್ಕಿಂತ ಇದು ಭಿನ್ನ. ದೇವರ ಅಸ್ತಿತ್ವದಲ್ಲಿಯ ನಂಬಿಕೆ ಮತ್ತು ದಿವ್ಯದರ್ಶನಗಳು ದೇವತಾವಾದದ ಆಧಾರ ಭಾವನೆಗಳು.

	ಜ್ಞಾನೋದಯದ ತತ್ತ್ವಗಳಲ್ಲಿ ಕೆಲವನ್ನು ಧರ್ಮಕ್ಕೆ ಅಳವಡಿಸುವ ಪ್ರಯತ್ನದ ಫಲವೇ ಈ ಪರದೈವತಾವಾದ. ಹದಿನೇಳು ಮತ್ತು ಹದಿನೆಂಟನೆಯ ಶತಮಾನದ ಅವಧಿಯಲ್ಲಿ ಹುಟ್ಟಿದ ತಾತ್ತ್ವಿಕ ಮತ್ತು ದೈವಿಕ ವಿವಾದಗಳನ್ನು ಕೊನೆಗೊಳಿಸುವುದಕ್ಕಾಗಿ ಈ ವಾದ ತಲೆ ಎತ್ತಿತು. ಪ್ರಪಂಚದ ನಿಯಮಬದ್ಧತೆ, ಸಾಮರಸ್ಯತೆ ಕ್ರಮಬದ್ಧತೆಗಳ ಅರಿವನ್ನು ವ್ಶೆಜ್ಞಾನಿಕ ಸಂಶೋಧನೆಯ ಬೆಳವಣಿಗೆ ಮೂಡಿಸಿತು. ಈ ಅರಿವು ಪವಾಡಗಳನ್ನು ಮಾಡದೆ ಪ್ರಾಕೃತಿಕ ನಿಯಮಗಳಿಗನುಸಾರಿಯಾಗಿ ಕೆಲಸ ಮಾಡುವ ದೇವರ ಕಲ್ಪನೆಯನ್ನು ಮೂಡಿಸಿಕೊಳ್ಳಲು ಅವಕಾಶ ಕೊಟ್ಟಿತು.

	ಈ ವಾದದ ಧೋರಣೆ ಹೀಗಿದೆ : ಭೌತಿಕ ಅಸ್ತಿತ್ವವನ್ನು ವಿವರಿಸಲು ಸೃಷ್ಟಿ ಕರ್ತನಾದ ದೇವರು ಇದ್ದಾನೆ. ಸೃಷ್ಟಿತ ಪ್ರಪಂಚದ ಅಭ್ಯಾಸದಿಂದ ಸೂಚಿತವಾಗುವ ದೇವರ ಕೆಲಸ ಬೈಬಲ್ಲಿನ ದೈವವಾಣಿಗಳಂತೆಯೇ ದೇವರ ಚಾರಿತ್ರ್ಯವನ್ನು ತಿಳಿಯಲು ಮಾರ್ಗದರ್ಶನ ಮಾಡುತ್ತದೆ. ದೇವರ ಅಸ್ತಿತ್ವ, ದಯಾಪರತೆ ಮತ್ತು ಆವಶ್ಯಕತೆಗಳು ಸ್ವತಃಸಿದ್ಧ ವಿಷಯವಾಗಿರದೆ ವಿಚಾರಾರ್ಹ ಅಂಶಗಳಾಗಿವೆ.

	ದೇವರು ಸೃಷ್ಟಿಕರ್ತನಾಗಿದ್ದರೂ ಪ್ರಪಂಚದ ಸೃಷ್ಟಿಯಾದ ಅನಂತರ ಸ್ವಾಯತ್ತತೆಯನ್ನು ಪಡೆಯುತ್ತದೆ. ಕುಶಲಕರ್ಮಿ ತಾನು ತಯಾರಿಸುವ ವಸ್ತುಗಳ ಗುಣಲಕ್ಷಣಗಳನ್ನು, ಅವುಗಳ ಭಾಗಗಳ ನಡುವಿನ ಸಂಬಂಧವನ್ನು, ಅವುಗಳ ಸ್ಥಾನವನ್ನು, ಕೆಲಸವನ್ನು ನಿರ್ಧರಿಸುವಂತೆ ದೇವರು ಪ್ರಪಂಚದ ರೀತಿನೀತಿಗಳನ್ನು, ವ್ಯವಸ್ಥೆ ಕ್ರಮ ಬದ್ಧತೆಯನ್ನು, ಕೆಲಸಕಾರ್ಯಗಳನ್ನು ನಿರ್ಧರಿಸುತ್ತಾನೆ. ಕುಶಲಕರ್ಮಿ ನಿರ್ಮಿಸಿದ ಕುಶಲವಸ್ತುಗಳು ನಿರ್ಮಾಣಕಾರ್ಯ ಮುಗಿದ ಮೇಲೆ ಸ್ವತಂತ್ರ ಅಸ್ತಿತ್ವವನ್ನು, ಸ್ವತಂತ್ರ ರೀತಿನೀತಿಯನ್ನು, ಕೆಲಸಕಾರ್ಯಗಳನ್ನು ಹೊಂದುವಂತೆ ಪ್ರಪಂಚವೂ ದೇವರಿಂದ ಸ್ವಾತಂತ್ರ್ಯವ್ನನ್ನು ಪಡೆಯುತ್ತದೆ.

	ಪ್ರಾರಂಭದಲ್ಲೇ ದೇವರು ಪ್ರಪಂಚಕ್ಕೆ ಸ್ವತಂತ್ರವಾಗಿ ಕೆಲಸ ಮಾಡಲು ಸಾಕಾಗುವಷ್ಟು ಶಕ್ತಿಯನ್ನು ಕೊಟ್ಟಿರುವುದರಿಂದ ಪ್ರಾಪಂಚಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಅವಕಾಶ ಮತ್ತು ಅಗತ್ಯ ದೇವರಿಗೆ ಇರುವುದಿಲ್ಲ. ಆದರೂ ಒಮ್ಮೊಮ್ಮೆ ಹಸ್ತಕ್ಷೇಪ ಮಾಡಬಹುದಾದ ಹಕ್ಕನ್ನು ದೇವರು ಹೊಂದಿರುವುದರಿಂದ ಪ್ರಪಂಚ ದೇವರಿಂದ ಸಂಪೂರ್ಣವಾಗಿ ಸ್ವತಂತ್ರ ಅಲ್ಲ. ಸೃಷ್ಟಿಕಾರ್ಯ ದೇವರ ಸರ್ವಜ್ಞತ್ವದ ಮತ್ತು ಸರ್ವಶಕ್ತತೆಯ ಪ್ರತೀಕಗಳೇ ಆಗಿವೆ.

	ಪ್ರಪಂಚ ಯಾಂತ್ರಿಕ ನಿಯಮಗಳಿಗನುಸಾರಿಯಾಗಿ ಕೆಲಸ ಮಾಡುತ್ತದೆ. ಮನುಷ್ಯರಿಗೆ ಈ ನಿಯಮಗಳನ್ನು ತಿಳಿದುಕೊಳ್ಳಬಲ್ಲ ಸಾಮಥ್ರ್ಯ, ಅವಕಾಶ ಇದೆ.

	ದೇವರು ಸರ್ವಾಧಿಕಾರಿ. ನೈತಿಕ ಹಾಗೂ ಭೌತಿಕ ನಿಯಮಗಳ ಕರ್ತೃ. ನೈತಿಕ ನಿಯಮಗಳು ವ್ಯಾವಹಾರಿಕ ಉದ್ದೇಶಗಳ ಈಡೇರಿಕೆಗಾಗಿ ಇದೆ. ಈ ನಿಯಮಗಳ ಅರಿವು ಸರ್ವೇಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಸುಖದುಃಖ, ವರ್ತಮಾನ ಮತ್ತು ಭವಿಷ್ಯಗಳು ಈ ನೈತಿಕ ನಿಯಮಗಳ ಪಾಲನೆ ಮತ್ತು ಉಲ್ಲಂಘನೆಗಳನ್ನು ಅವಲಂಬಿಸಿರುತ್ತವೆ. ಆತ್ಮ ಅಮರವಾಗಿದ್ದು ಮನುಷ್ಯರು ತಂತಮ್ಮ ಕೆಲಸಗಳಿಗನುಗುಣವಾಗಿ ಶಿಕ್ಷೆ, ಬಹುಮಾನಗಳನ್ನು ಪಡೆಯುತ್ತಾರೆ. ಮನುಷ್ಯರು ಉನ್ನತಮಟ್ಟದ ಬದುಕನ್ನು ನಡೆಸಬೇಕಾದರೆ ದೈವೀ ಸಂಪರ್ಕವನ್ನು ಪಡೆಯಬೇಕು.

	ಸ್ಟೋಯಿಕ್ಕರನ್ನು, ಕಾನ್‍ಫ್ಯೂಷಿಯನ್ನರನ್ನು ಮುಸ್ಲಿಮರನ್ನು ಪರದೈವತಾವಾದಿಗಳೆಂದೂ ಕರೆಯಬಹುದಾದರೂ 17-18ನೆಯ ಶತಮಾನದಲ್ಲಿ ಕ್ರಿಶ್ವನ್ ತತ್ತ್ವಶಾಸ್ತ್ರವನ್ನು ಪ್ರಾಕೃತಿಕ ಧರ್ಮದ ಸರಳರೂಪವೆಂದು ವಿವರಿಸಲು ಪ್ರಯತ್ನಪಟ್ಟವರನ್ನು ಸಾಮಾನ್ಯವಾಗಿ ಪರದೈವತಾವಾದಿಗಳೆಂದು ಗುರುತಿಸಲಾಗಿದೆ. ಇವರು ಪವಾಡಗಳನ್ನು, ಭವಿಷ್ಯದ ಅಂಶಗಳನ್ನು ಬೈಬಲ್ಲಿನಿಂದ ತೆಗೆದುಹಾಕಿ, ಬೈಬಲ್ಲನ್ನು ಪುನರ್ರಚಿಸಿ ಅದನ್ನು ವಿಚಾರಾತ್ಮಕ ಧಾರ್ಮಿಕ ಗ್ರಂಥವನ್ನಾಗಿಸಲು ಪ್ರಯತ್ನಿಸಿದರು. ದೇವತಾ ಶಾಸ್ತ್ರದ, ದೇವರ ಪೂಜಾವಿಧಿಗಳ ರಹಸ್ಯಾಂಶಗಳನ್ನು ಕಿತ್ತುಹಾಕಿದರು. ದೇವರ ಪಿತೃತ್ವವನ್ನು ಸಾರುವ ಪ್ರವಾದಿಯನ್ನಾಗಿ ಕ್ರಿಸ್ತನನ್ನು ಚಿತ್ರಿಸಿದರು. ದೈವೀ ಕೃಪೆಗನುಸಾರಿಯಾಗಿ ಮನುಷ್ಯನ ಕರ್ತವ್ಯ ಇರಬೇಕೆಂದು ಅಭಿಪ್ರಾಯಪಟ್ಟರು.

	1754ರಲ್ಲಿ ಪರದೈವತಾವಾದವನ್ನು ಬೆಂಬಲಿಸಿ ಕೃತಿಗಳನ್ನು ರಚಿಸಿದವರಲ್ಲಿ ಹಲವು ಪ್ರಮುಖರೆಂದರೆ ಲಾರ್ಡ್ ಹರ್ಬರ್ಟ್, ಚಾಲ್ರ್ಸ್ ಬ್ಲೌಂಟ್, ಷಾಫ್ಟಫ್ಟ್ಸಬರಿ, ತಾಮಸ್ ಪೇನ್, ಎಲಿಹು ಪಾಮರ್, ತಾಮಸ್ ವೂಲ್‍ಸ್ಟನ್, ಮ್ಯಾತ್ಯು ಟಿಂಡಲ್, ತಾಮಸ್ ಮೋರ್ಗನ್, ತಾಮಸ್ ಚಬ್, ಆಂತೊನಿ ಕಾಲಿನ್ಸ್-ಇವರು. ಈ ಎಲ್ಲ ಪರದೈವತಾವಾದಿಗಳು ಪರಸ್ಪರ ಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದರಿಂದ ಇವರಲ್ಲಿ ಯಾರೊಬ್ಬರ ಕೃತಿಯನ್ನೂ ಪರದೈವತಾವಾದದ ಕೈಪಿಡಿ ಎಂದು ಪರಿಗಣಿಸಲಾಗುವುದಿಲ್ಲ.

	ಲಾರ್ಡ್ ಹರ್ಬರ್ಟನನ್ನು ಆಂಗ್ಲ ಪರದೈವತಾವಾದದ ಜನಕ ಎಂದು ಕರೆಯುತ್ತಾರೆ. ಇವನು ಅನಾದಿ ಕಾಲದಿಂದ ಮನಸ್ಸಿನಲ್ಲಿ ಅಂತರ್ಗತವಾಗಿರುವ, ದೈವದತ್ತ ಐದು ಧಾರ್ಮಿಕ ತತ್ತ್ವಗಳನ್ನು ತನ್ನ ಕೃತಿಗಳಲ್ಲಿ ಪರಿಚಯಿಸುತ್ತಾನೆ : 1 ದೇವರು ಒಬ್ಬ. ಇವನೇ ಆತ್ಯಂತಿಕ ಸತ್ಯ. 2 ದೇವರು ಪ್ರಜಾರ್ಹ. ದೇವರನ್ನು ಪೂಜಿಸುವುದು ಮನುಷ್ಯನ ಕರ್ತವ್ಯ. 3 ಪೂಜೆಯ ಮುಖ್ಯ ಭಾಗಗಳು ಸದ್ವರ್ತನೆ ಮತ್ತು ಭಕ್ತಿ. 4 ಪಾಪಕ್ಕೆ ಪ್ರಾಯಶ್ಚಿತ್ತ ಇದೆ. ಪಶ್ಚಾತ್ತಾಪ ಪಟ್ಟರೆ ಪಾಪಿಗೆ ಕ್ಷಮೆ ಸಿಕ್ಕುತ್ತದೆ. 5 ಮನುಷ್ಯ ತನ್ನ ಒಳ್ಳೆಯ ಹಾಗೂ ಕೆಟ್ಟ ಕಾರ್ಯಗಳಿಗೆ ಸೂಕ್ತ ಪ್ರತಿಫಲವನ್ನು ತನ್ನ ಜೀವನದ ಕೊನೆಯಲ್ಲಿ ಪಡೆಯುತ್ತಾನೆ.

	ಹರ್ಬರ್ಟನ ಪ್ರಕಾರ ಈ ಧಾರ್ಮಿಕ ತತ್ತ್ವಗಳೇ ಆದಿ ಮಾನವನ ಆಸ್ತಿ ಮತ್ತು ಅವನ ಕಾಲದ ಧಾರ್ಮಿಕ ಸಂಸ್ಥೆಗಳ ಆಧಾರ ಸ್ತಂಭ ಆಗಿದ್ದುದರಿಂದ ಸುವ್ಯವಸ್ಥೆ, ಯೋಗ್ಯ ಬದುಕನ್ನು ಅವನ ಕಾಲದಲ್ಲಿ ಕಾಣಬಹುದಾಗಿತ್ತು. ಆದರೆ ಈ ಧಾರ್ಮಿಕ ತತ್ತ್ವಗಳನ್ನು ರೂಪಾಂತರಗೊಳಿಸಿ ಹೊಸ ಹೊಸ ಧರ್ಮಗಳು ತಲೆ ಎತ್ತಿದಾಗ ಧರ್ಮದ ಜೊತೆಯಲ್ಲಿ ಅಮಾನುಷ ಚಟುವಟಿಕೆಗಳು ಬೆರೆತು ಧರ್ಮ ತನ್ನ ಪ್ರಭಾವವನ್ನು ಕಳೆದುಕೊಂಡಿತು. ಪುರೋಹಿತಶಾಹಿ ತಲೆ ಎತ್ತಿತು. ಆಡಂಬರ, ವೈಭವಗಳು ಧಾರ್ಮಿಕ ನಡವಳಿಕೆಗಳಲ್ಲಿ ಬೆರೆತವು. ಮನುಷ್ಯ ಸ್ವಾರ್ಥ-ಅಹಂಕಾರಕ್ಕೆ ಸಿಕ್ಕಿ ತಪ್ಪು ಹಾದಿಯಲ್ಲಿ ನಡೆಯಲಾರಂಭಿಸಿದ. ಧಾರ್ಮಿಕ ಕಂದಾಚಾರಗಳನ್ನು, ಆಡಂಬರ ವೈಭವಗಳನ್ನು ತ್ಯಜಿಸಿದ ಹೊರತೂ ಸ್ವಾರ್ಥಿ ಪುರೋಹಿತರ ಹಿಡಿತದಿಂದ ಪಾರಾಗದ ಹೊರತೂ ಅವರು ರೂಪಿಸಿದ ಧಾರ್ಮಿಕ ವಿಧಿವಿಧಾನಗಳನ್ನು ಕೈಬಿಟ್ಟ ಹೊರತೂ ಮನುಷ್ಯ ಪರಿಶುದ್ಧನಾಗಲಾರ. ಈ ಅಭಿಪ್ರಾಯಗಳನ್ನು ಜಾನ್ ಬೋಲೆಮಡ್, ವೂಲ್‍ಸ್ಟನ್, ಟಿಂಡಲ್, ಕಾಲಿನ್ಸ್ ಮೊದಲಾದವರು ಸಮರ್ಥಿಸುತ್ತಾರೆ.

	ಧರ್ಮಾಂಧತೆಯನ್ನು, ಧಾರ್ಮಿಕ ಆವೇಶವನ್ನು ಬಲವಾಗಿ ವಿರೋಧಿಸಿ ಸಿಡಿದೆದ್ದ ಷಾಫ್ಟ್ಸ್‍ಬರಿ ಎಲ್ಲ ರೀತಿಯ ಧಾರ್ಮಿಕ ವೈಪರೀತ್ಯಗಳೂ ನೈಜಧರ್ಮದ ಕುರೂಪಿ ರೂಪಾಂತರಗಳೆ ಆಗಿವೆ ಎನ್ನುತ್ತಾನೆ. ನೈಜಧರ್ಮ ಅಭಿವ್ಯಕ್ತಗೊಳ್ಳುವುದು ಆರೋಗ್ಯವಂತ ಮನುಷ್ಯನಲ್ಲಿ ಮಾತ್ರ ಎನ್ನುವ ಷಾಫ್ಟ್ಸ್‍ಬರಿ ತೀವ್ರ ವೈರಾಗ್ಯ, ಆತ್ಮಹಿಂಸೆ, ಧಾರ್ಮಿಕ ದಬ್ಬಾಳಿಕೆ ಇವೆಲ್ಲ ಮಾನಸಿಕ ರೋಗದ ಲಕ್ಷಣಗಳು ಎಂದು ಅಭಿಪ್ರಾಯಪಡುತ್ತಾನೆ. ದೇವರು ಮೃದುಸ್ವಭಾವದವನಾಗಿದ್ದು ತನ್ನ ಸೃಷ್ಟಿಯನ್ನು ಕರುಣೆ ಪ್ರೀತಿಗಳಿಂದ ಕಾಣುತ್ತಾನೆ ಮತ್ತು ತನ್ನಂತೆಯೇ ಮನುಷ್ಯರು ಸದ್ವರ್ತನೆಯನ್ನು ಹೊಂದಿರಬೇಕೆಂದು ಅಪೇಕ್ಷಿಸುತ್ತಾನೆ. ಆದ್ದರಿಂದ ದೇವರನ್ನು ಹಿಂಸಾಮೂರ್ತಿಯನ್ನಾಗಿ, ಅಸೂಯಾಪರನಾಗಿ, ವಿನಾಶಕಾರಿಯಾಗಿ, ಕ್ರೂರಿಯಾಗಿ, ಚಿತ್ರಿಸುವ ಧರ್ಮಗಳೆಲ್ಲ ಪಾಷಂಡಿ ಧರ್ಮಗಳು ಎಂದು ಷಾಫ್ಟ್ಸ್‍ಬರಿ ಅಬ್ಬರಿಸುತ್ತಾನೆ.

	ಷಾಫ್ಟ್ಸ್‍ಬರಿಯ ಕೃತಿಗಳು ಭಾಷಾಂತರವಾದ ಅನಂತರ ಪರದೈವತಾವಾದ ಜರ್ಮನಿಗೆ ಹರಡಿತು. ಇಂಗ್ಲೆಂಡಿನಲ್ಲಿ ಪರದೈವತಾವಾದ ವಿವಾದಕ್ಕೆಡೆಕೊಟ್ಟ ಹಾಗೆಯೇ ಜರ್ಮನಿಯಲ್ಲೂ ಎಡೆ ಕೊಟ್ಟಿತು. ಲೈಬ್ನಟ್ಸ್‍ನಂಥ ತತ್ತ್ವಶಾಸ್ತ್ರಜ್ಞರು ಪರದೈವತಾವಾದದಿಂದ ಪ್ರಭಾವಿತರೂ ಆದರು. ಚಾಲ್ರ್ಸ್ ಬ್ರೌಂಟ್ ಬೈಬಲ್ಲಿನಂಥ ಕೃತಿಗಳನ್ನು ವಿಮರ್ಶಿಸಿ, ಅದರಲ್ಲಿರುವ ಪವಾಡದ ವರದಿಗಳು ಐತಿಹಾಸಿಕ ಸತ್ಯವಾಗಿರದೆ ಅವು ಕೇವಲ ನೈತಿಕ ಮಾರ್ಗದರ್ಶಿಗಳಾಗಿವೆ ಎಂದು ಅಭಿಪ್ರಾಯಪಟ್ಟು ಶೃತಿಗಳನ್ನು ಪದಶಃ ವಿವರಿಸುವವರನ್ನು ಟೀಕಿಸುತ್ತಾನೆ. ವೂಲ್‍ಸ್ಟನ್ ಈ ಅಭಿಪ್ರಾಯಗಳನ್ನು ಬೆಂಬಲಿಸಿ ಹೊಸ ಮತ್ತು ಹಳೆ ಒಡಂಬಡಿಕೆಗಳನ್ನು ರೂಪಕಗಳಂತೆ ಅರ್ಥೈಸಲು ಪ್ರಯತ್ನಸಿದ್ದಾನೆ.

	ಎಲಿಹು ಪಾಮರ್ ಪರದೈವತಾವಾದವನ್ನು ಸಂಯುಕ್ತ ಸಂಸ್ಥಾನಳಿಗೆ, ವ್ಯವಸ್ಥಿತ ಸಮಾಜಗಳಿಗೆ ಹರಡಿ ಪ್ರಚುರಪಡಿಸಿದ. ತಾಮಸ್ ಪೇನ್ ಈ ವಾದದ ಆಧಾರದ ಮೇಲೆ ತುಲನಾತ್ಮಕ ಧರ್ಮವನ್ನು ಸಂಶೋಧಿಸಲು ಪ್ರಯತ್ನಿಸಿದ. ಇದರ ಫಲವಾಗಿ ಪರದೈವತಾವಾದ ಉಚ್ಚವರ್ಗದ ಅಮೆರಿಕನ್ನರ ಪ್ರಧಾನ ಧಾರ್ಮಿಕ ನಿಲುವಾಯಿತು. 

	ಈ ವಾದದಲ್ಲಿ ಕೆಲವು ತಾತ್ತ್ವಿಕ ದೋಷಗಳಿವೆ. ಪ್ರಪಂಚ ನಿರ್ಮಿತವಾದ ಮೇಲೆ ದೇವರು ಮತ್ತು ಪ್ರಪಂಚ ಪರಸ್ಪರ ಸ್ವತಂತ್ರ ಎಂದು ಈ ವಾದ ಒಪ್ಪುವುದರಿಂದ ದೇವರನ್ನು ಏಕಮಾತ್ರ ಆತ್ಯಂತಿಕ ಸತ್ಯ ಎಂದು ಪರಿಗಣಿಸಲಾಗುವುದಿಲ್ಲ. ಪ್ರಪಂಚದ ಅರಿವು ಮಾತ್ರ ಮನುಷ್ಯರಿಗೆ ನೇರವಾಗಿ ಆಗುವುದರಿಂದ ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹ ತಾಳಬಹುದಾಗಿದೆ.

	ದೇವರನ್ನು ನೈತಿಕ ನಿಯಮದ ಶಾಸಕ ಮತ್ತು ಸರ್ವಾಧಿಕಾರಿ ಎಂದು ಈ ವಾದ ಚಿತ್ರಿಸುವುದರಿಂದ ದೈವೇಚ್ಛೆ, ದೈವಸಂತೋಷಕ್ಕನುಗುಣವಾಗಿ ನೈತಿಕನಿಯಮ ಇದೆ. ಅಥವಾ ದೇವರು ತನ್ನಿಂದ ಸ್ವತಂತ್ರವಾಗಿರುವ ನೈತಿಕ ನಿಯಮಕ್ಕನುಸಾರಿಯಾಗಿ ವರ್ತಿಸುತ್ತಾನೆಂದು ತಿಳಯಬೇಕಾಗುತ್ತದೆ. ಎರಡೂ ಸಂದರ್ಭಗಳಲ್ಲಿ ದೇವರನ್ನು ಒಳ್ಳೆಯವನೆಂದೂ ಶ್ರೇಷ್ಠ ಸತ್ಯವೆಂದೂ ಭಾವಿಸಲು ಆಗುವುದಿಲ್ಲ.

	ಪ್ರಪಂಚ ಸ್ವಾಯತ್ತ ಎಂದು ಈ ವಾದ ಭಾವಿಸುವುದರಿಂದ ಮನುಷ್ಯರಿಗೆ ದೇವರಲ್ಲಿ ಗೌರವ, ಭಕ್ತಿ, ವಿಧೇಯತೆಯನ್ನು ತೋರಿಸಬೇಕೆಂಬ ಭಾವನೆಗಳು ಬರುವುದರ ಬದಲಾಗಿ ದೇವರಿಂದ ನಮಗೆ ಆಗಬೇಕಾದುದು ಯಾವುದೂ ಇಲ್ಲ, ಸೃಷ್ಟಿಯ ನಿಯಮಗಳನ್ನು ಸ್ವಂತವಾಗಿ ತಿಳಿದುಕೊಂಡು ಸ್ವಾವಲಂಬಿಯಾಗಿ ಬದುಕುತ್ತಾನೆ ಎಂಬ ಭಾವನೆಗಳು ಬರುತ್ತವೆ. ಇದರ ಪರಿಣಾಮವಾಗಿ ಸಾಮಾಜಿಕ ಜೀವನ ಕಲುಷಿತಗೊಳ್ಳುವ ಸಾಧ್ಯತೆಗೆ ಅವಕಾಶವಾಗುತ್ತದೆ.

	ಈ ವಾದ ದೇವರಿಗೆ ಪ್ರಾಪಂಚಿಕ ಚಟುವಟಿಕೆಗಳಲ್ಲಿ ಒಮ್ಮೊಮ್ಮೆ ಹಸ್ತಕ್ಷೇಪ ಮಾಡುವ ಹಕ್ಕನ್ನು ಕೊಟ್ಟಿರುವುದರಿಂದ ದಿವ್ಯದರ್ಶನದ ಸಾಧ್ಯತೆಯನ್ನು ಸಂಪೂರ್ಣವಾಗಿ ನಿರಾಕರಿಸಲು ಆಗುವುದಿಲ್ಲ. ಆದರೂ ದಿವ್ಯದರ್ಶನವನ್ನು ಎಲ್ಲಾ ಪರದೈವತಾವಾದಿಗಳೂ ಆಗ್ರಹಪೂರ್ವಕವಾಗಿ ನಿರಾಕರಿಸುವುದು ಕಂಡುಬರುತ್ತದೆ.

	ಈ ವಾದ ವ್ಯಾವಹಾರಿಕ ದೋಷಗಳನ್ನೂ ಒಳಗೊಂಡಿದೆ. ದೇವರೊಂದಿಗೆ ಮನುಷ್ಯ ಪಡೆಯುವ ಸಂಪರ್ಕದೊಂದಿಗೆ ಅವನ ಉನ್ನತಮಟ್ಟದ ಬದುಕನ್ನು ಗಂಟು ಹಾಕಿರುವುದರಿಂದ ಮನುಷ್ಯ ಚೆನ್ನಾಗಿ ಬದುಕಬೇಕಾದರೆ ದೈವೀಸಂಪರ್ಕವನ್ನು ಪಡೆಯುವುದು ಅನಿವಾರ್ಯ. ಆದರೆ ಪ್ರಪಂಚದ ಕಲ್ಪನೆ ಪ್ರಪಂಚದ ಸೌಂದರ್ಯ, ವ್ಯವಸ್ಥೆಯನ್ನು ಸೂಚಿಸುತ್ತದೆಯೇ ವಿನಾ ದೈವೀ ಅಸ್ತಿತ್ವವನ್ನು ಸೂಚಿಸುವುದಿಲ್ಲ. ಮತ್ತೆ ಸ್ವಾಯತ್ತ ಪ್ರಪಂಚದ ಕಲ್ಪನೆ ಮನುಷ್ಯನನ್ನು ಏಕಾಂಗಿ, ಸ್ವಾವಲಂಬಿ ಬದುಕನ್ನು ನಡೆಸುವಂತೆ ಪ್ರೇರೇಪಿಸುತ್ತದೆಯೇ ವಿನಾ ತನಗಿಂತ ದೊಡ್ಡವನಾದ ದೇವರು ಒಬ್ಬನು ಇದ್ದಾನೆ, ಅವನನ್ನು ಪೂಜಿಸಿದರೆ, ಅವನನ್ನು ಗೌರವಿಸಿದರೆ, ಅವನಿಗೆ ವಿಧೇಯತೆ ತೋರಿಸಿದರೆ ಅವನು ತನಗೆ ಒಲಿಯುತ್ತಾನೆ. ತನ್ನನ್ನು ಅವನ ಸಮೀಪಕ್ಕೆ ಒಯ್ಯುತ್ತಾನೆ, ಕರುಣೆ-ಪ್ರೀತಿಗಳಿಂದ ತನ್ನ ಬದುಕನ್ನು ನೇರಗೊಳಿಸುತ್ತಾನೆ-ಎಂಬೆಲ್ಲ ಭಾವನೆಗಳನ್ನೂ ಹುಟ್ಟಿಸಿಕೊಳ್ಳುವಂತೆ ಪ್ರೇರೇಪಿಸುವುದೇ ಇಲ್ಲ. ಹೀಗಾಗಿ ಈ ವಾದವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಧಾರ್ಮಿಕ ಬದುಕನ್ನು ನಡೆಸಲು ಸಾಧ್ಯ ಆಗುವುದಿಲ್ಲ.

ಈ ದೋಷಗಳು ಪರದೈವತಾವಾದ ತನ್ನ ಪ್ರಭಾವವನ್ನು ಕ್ರಮೇಣ ಕಳೆದುಕೊಳ್ಳುವಂತೆ ಮಾಡಿದವು.        (ಕೆ.ಎಲ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ